ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ ಈ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯವು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇದೆ.
ಯಾವುದೇ ಒಂದು ವೃತ್ತಿ ಗುಣಾತ್ಮಕವಾಗಿ ಬೆಳೆದು ತನ್ನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಆ ವೃತ್ತಿಗೆ ಸಂಬಂಧಿಸಿದ ವೃತ್ತಿಪರ ಸಂಘಟನೆ ಹಾಗೂ ರಾಷ್ಟ್ರೀಯ ಪರಿಷತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಿಷಾದದ ಸಂಗತಿಯೆಂದರೆ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯಕರ್ತರ ಶಕ್ತಿಶಾಲಿಯಾದ ವೃತ್ತಿಪರ ಸಂಘಟನೆ ಇಲ್ಲದಿರುವುದು ಮತ್ತು ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆ ಆಗದಿರುವುದು. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಮಾಜಕಾರ್ಯ ಪರಿಷತ್ತಿನ ಸ್ಥಾಪನೆಯಾಗಿ, ರಾಷ್ಟ್ರೀಯ ಸಮಾಜಕಾರ್ಯ ಸಂಘಟನೆ ಸ್ಥಾಪನೆಯಾಗಿ, ಸಮಾಜಕಾರ್ಯ ವೃತ್ತಿಗೊಂದು ನ್ಯಾಯ ಒದಗಿಸಿ ಕೊಡುತ್ತವೆ ಎಂದು ಆಶಿಸೋಣ.